ಕರ್ಪೂರರಾಳಗಳು

ಬಹುಮುಖ ಬಳಕೆಗೆ ಅಗ್ರಸ್ಥಾನ ಪಡೆದಿರುವ ರಾಸಾಯನಿಕ ಸಂಯುಕ್ತಗಳು (ರೆಸಿóನ್ಸ್). ನೈಸರ್ಗಿಕ ಕರ್ಪೂರರಾಳಗಳು ಕಾರ್ಬನ್, ಹೈಡ್ರೊಜನುಗಳಿಂದಲೂ ಸಾಪೇಕ್ಷವಾಗಿ ಕಡಿಮೆ ಪ್ರಮಾಣದ ಆಕ್ಸಿಜನ್ನಿನಿಂದಲೂ ಉಂಟಾಗರಿರುವ ಸಂಕೀರ್ಣ ಸಂಯುಕ್ತಗಳು. ಕಪ್ಪುರಾಳ ಮತ್ತು ಇಂಗಿನಿಂದ ಮೊದಲುಗೊಂಡು ಸಾಂಬ್ರಾಣಿ. ಗಂಧರಸ, ಪಳೆಯುಳಿಕೆಯಾದ ಸಿಲಾರಾಳ ಎಲ್ಲವೂ ನೈಸರ್ಗಿಕ ಕರ್ಪೂರರಾಳಗಳ ಗುಂಪಿಗೆ ಸೇರುತ್ತವೆ. ಆರಂಭದಲ್ಲಿ ಕರ್ಪೂರರಾಳ (ರೆಸಿóನ್) ಎನ್ನುವ ಮಾತು ಪೈನ್ ಮತ್ತು ಫರ್ ಮರಗಳಿಂದ ಜಿನುಗುವ ಹಳದಿ ಅಥವಾ ಕಂದು ಬಣ್ಣದ ಒಂದು ಬಗೆಯ ಅಂಟುವಸ್ತುವಿಗೆ ಮಾತ್ರ ಸೀಮಿತವಾಗಿತ್ತು. ನೈಸರ್ಗಿಕ ಕರ್ಪೂರರಾಳಗಳ ಬಗ್ಗೆ ತಿಳಿವು ಹೆಚ್ಚಿದಂತೆಲ್ಲ ಅವನ್ನು ಹೋಲುವ ಅನೇಕ ಇತರ ಸಂಯುಕ್ತಗಳನ್ನೂ ಈ ಗುಂಪಿಗೆ ಸೇರಿಸಲಾಗಿದೆ. ಸಂಶ್ಲೇಷಿತ ಕರ್ಪೂರರಾಳಗಳು ನೈಲಾನ್ ಮತ್ತು ಬಿಲಿಯರ್ಡ್ ಚಂಡುಗಳು ಮೊದಲಾದ ಅನೇಕಾನೇಕ ಉತ್ಪನ್ನಗಳ ಮೂಲಾಧಾರವಾಗಿವೆ. ಅನೇಕ ಉದ್ಯಮಗಳಲ್ಲಿ, ವಿಶೇಷವಾಗಿ ಅಚ್ಚುಹೊಯ್ಯುವ ಮತ್ತು ಲೇಪನ ಉದ್ಯಮಗಳಲ್ಲಿ ನೈಸರ್ಗಿಕ ಕರ್ಪೂರರಾಳದ ಸ್ಥಾನದಲ್ಲಿ ಈಗ ಯಾವುದಾದರೊಂದು ಸಂಶ್ಲೇಷಿತ ಕರ್ಪೂರರಾಳವನ್ನು ಉಪಯೋಗಿಸಬಹುದಾಗಿದೆ (ನೋಡಿ- ಪ್ಲಾಸ್ಟಿಕ್ಕುಗಳು)

ಕರ್ಪೂರರಾಳಗಳನ್ನು ಅವುಗಳ ಚಿರಪರಿಚಿತ ಲಕ್ಷಣಗಳಿಂದ ಪಾರದರ್ಶಕತ್ವ. ಅಸ್ಫಟಿಕಾಕೃತಿ, ಭಿದುರತೆ ಮತ್ತು ಶಂಕ್ವಾಕೃತಿಯ ಸೀಳಿಕೆಗಳಿಂದ ಗುರುತಿಸಲಾಗುತ್ತಿತ್ತು. ಇವಾವ ಗುಣವೂ ಇಲ್ಲದ ಕೆಲವು ಬಾರಿ ವಿರುದ್ಧ ಗುಣಗಳನ್ನು ಹೊಂದಿರುವ ಕರ್ಪೂರ ರಾಳಗಳನ್ನು ಈಗ ಸಂಶ್ಲೇಷಿಸಲಾಗಿದೆ. ನೈಸರ್ಗಿಕ ಮತ್ತು ಸಂಶ್ಲೇಷಿತ ಕರ್ಪೂರರಾಳಗಳೆರಡಕ್ಕೂ ಅನ್ವಯಿಸುವ ಏಕೈಕ ಗುಣವೆಂದರೆ ಅವುಗಳ ಅಸ್ತಿತ್ವದ ಒಂದು ಹಂತದಲ್ಲಿ ಅವೆರಡೂ ಮೆದುವಾಗಿರುವುದು.

ಕರ್ಪೂರರಾಳ ಮತ್ತು ಪ್ಲಾಸ್ಟಿಕುಗಳಿಗಿರುವ ಭೇದ ಕೇವಲ ಸೌಕರ್ಯಾತ್ಮಕ. ಐತಿಹಾಸಿಕವಾಗಿ ಲೇಪನಪ್ರಧಾನ ಸಾಮಗ್ರಿಗಳನ್ನು ಕರ್ಪೂರಗಳೆಂದೂ ರೂಪಸ್ಪಷ್ಟನೆಗೆ ಅಚ್ಚುಹೊಯ್ಯಬೇಕಾಗಿದ್ದ ಸಂಯೋಜನೆಗಳಿಗೆ ಪ್ಲಾಸ್ಟಿಕುಗಳೆಂದೂ ಕರೆದಂತಿದೆ. ಕರ್ಪೂರಾಳಗಳು, ಪ್ಲಾಸ್ಟಿಕುಗಳು, ರಬ್ಬರ್ ಮತ್ತು ಎಳೆಗಳು-ಎಲ್ಲವೂ ಒಂದೇ ಬೃಹದ್ಗುಂಪಿನ ಬೇರೆ ಬೇರೆ ರಸಾಯನ ಸಂಯುಕ್ತಗಳೆಂಬುದು ಈಗ ನಿರ್ವಿವಾದ. ಸೂಕ್ತರೂಪಾಂತರಗಳಿಂದ ಮೇಲಿನ ಒಂದು ಗುಂಪಿನ ಯಾವುದೇ ಸಂಯುಕ್ತವನ್ನು ಬೇರೆ ಗುಂಪಿನ ಸಂಯುಕ್ತವಾಗಿ ಮಾರ್ಪಡಿಸಬಹುದು.

ಕರ್ಪೂರರಾಳ ಸೃಷ್ಟಿ : ಗಾಳಿ, ಬೆಂಕಿ, ಸಿಡಿಲು ಅಥವಾ ಬೇರಾವುದೇ ಕಾರಣದಿಂದ ತೂಗಟೆಗೆ ಹಾನಿಯಾದಾಗ ಮರದಲ್ಲಿ ಕರ್ಪೂರರಾಳ ಸೃಷ್ಟಿಯಾಗುತ್ತದೆ. ಪ್ರಾರಂಭದಲ್ಲಿ ಈ ಸ್ರಾವ ದ್ರವರೂಪದ್ದಾಗಿದ್ದು ತೈಲರಾಳ ಅಥವಾ ಗುಗ್ಗುಲದಂತೆ ಕಾಣುತ್ತದೆ. ಗಾಳಿಯ ಸಂಪರ್ಕದಲ್ಲಿ ಬಾಷ್ಪಶೀಲ ಘಟಕಗಳು ಆವಿಯಾಗುತ್ತವೆ. ಉಳಿದ ಘನವಸ್ತು ಉತ್ಕರ್ಷಣ ಹೊಂದಿ, ಬಹ್ವಂಗೀಕರಿಸಿ ಕ್ರಮೇಣ ಮೆದುವಾದ ಕರ್ಪೂರರಾಳವಾಗಿ ಮಾರ್ಪಡುತ್ತದೆ. ವೃಕ್ಷದಲ್ಲಿ ಕರ್ಪೂರರರಾಳಧಾರೆ ವಿಪುಲವಾಗಿದ್ದಾಗ ಅದರ ಕೆಲವಂಶ ಭೂಮಿಯನ್ನು ಸೇರುತ್ತದೆ. ಪರಿಣಾಮವಾಗಿ ಅನೇಕ ಪಳೆಯುಳಿಕೆ ಕರ್ಪೂರರಾಳಗಳು ಇಂದು ಭೂಮಿಯಲ್ಲಿ ನಿಕ್ಷೇಪಗಳಾಗಿ ದೊರೆಯುತ್ತಿವೆ. ಇತ್ತೀಚಿನ ಪಳೆಯುಳಿಕೆಯಾಗಿದ್ದರೂ ಅದರ ನಿರ್ಮಾಣಕ್ಕೆ ಕಾರಣವಾದ ರಸಾಯನ ಕ್ರಿಯೆ ಸಾವಿರಾರು ವರ್ಷಗಳವರೆಗೂ ನಡೆದಿರಬೇಕು. ಉದಾಹರಣೆಗೆ ಕೌರಿಪೈನ್ ಮರಗಳ ಆಯುಷ್ಯ ಸರಾಸರಿ 1000 ವರ್ಷಗಳು. ಹಿಂದಿನ ಅರಣ್ಯಗಳೆಲ್ಲವೂ ಸಂಪೂರ್ಣವಾಗಿ ನಾಶವಾಗಿರುವೆಡೆಗಳಲ್ಲಿ ಇಂದು ಕರ್ಪೂರರಾಳ ಸಿಕ್ಕುತ್ತಿರುವುದನ್ನು ಗಮನಿಸಿದರೆ ಅದು ಅತಿ ಪ್ರಾಚೀನವಾದುದು ಎಂಬುದು ಸ್ಪಷ್ಟ. ಅದೂ ಕೂಡ ದ್ರಾವ್ಯ. ಪಳೆಯುಳಿಕೆ ಕರ್ಪೂರರಾಳವಾದ ಶಿಲಾರಾಳ ಅಷ್ಟಾಗಿ ದ್ರಾವ್ಯವಲ್ಲ. ತೈಲರಾಳ ಕಾಲಕ್ರಮೇಣ ಕರ್ಪೂರರಾಳ, ಇತ್ತೀಚಿನ ಪಳೆಯುಳಿಕೆ ಕರ್ಪೂರರಾಳ, ಅಂತಿಮವಾಗಿ ಪಳೆಯುಳಿಕೆ ಕರ್ಪೂರರಾಳವಾಗಿ ಬಹ್ವಂಗೀಕರಣಗೊಳಲು ಅಗತ್ಯವಾದ ಕಾಲವನ್ನು ಭೂ ಇತಿಹಾಸ ಕಾಲಮಾನದಲ್ಲಿ ಗಣಿಸಬೇಕೆಂಬುದನ್ನು ಶಿಲಾರಾಳದ ಅಸ್ತಿತ್ವವೇ ಶ್ರುತಪಡಿಸುತ್ತದೆ. 

ಪ್ರಪಂಚದ ಅನೇಕ ಭಾಗಗಳಲ್ಲಿ ಕರ್ಪೂರರಾಳದ ನಿಕ್ಷೇಪಗಳು ದೊರೆತಿವೆ. ಅನೇಕವನ್ನು ಅವು ದೊರೆತ ಪ್ರದೇಶಗಳ ಹೆಸರುಗಳಿಂದಲೇ ಕರೆಯಲಾಗಿದೆ. ಚೈನೀಯರು ಮತ್ತು ಜಪಾನೀಯರು ಮೆರುಗೆಣ್ಣೆಗಳ ತಯಾರಿಕೆಯಲ್ಲಿ ಈ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದರು. ಇಂಕಾಗಳು ಮತ್ತು ಈಜಿಪ್ಟಿಯನ್ನರು ವಾರ್ನಿಷುಗಳನ್ನು ಬಳಸುತ್ತಿದ್ದರೆನ್ನುವುದಕ್ಕೆ ಸಾಕ್ಷ್ಯಗಳಿವೆ. ಫಿನೀಷಿಯನ್ನರು ಮತ್ತು ಗ್ರೀಕರು ಕರ್ಪೂರರಾಳಗಳ ಪರಿಚಯ ಪಡೆದಿದ್ದರು. ಶಿಲಾರಾಳವನ್ನು ಗ್ರೀಕರು ಬೆರೀನೀಸ್ ಎನ್ನುತ್ತಿದ್ದರು. ಅದರ ಅಪಭ್ರಂಶವೇ ಇಂದಿನ ವಾರ್ನಿಷ್.  

ಮರದಿಂದ ಒಸರುವ ಯಾವುದೇ ಅಂಟುದ್ರವಕ್ಕೆ ಗೋಂದು ಎಂದು ಹೆಸರು. ಅರಗು ಕೀಟಸ್ರಾವವಾದುದರಿಂದ ಇದರಿಂದ ಬೇರೆಯಾಗಿದೆ. ಸಹಜ ಗೋಂದುಗಳು ನೀರಿನಲ್ಲಿ ಕರಗುತ್ತವೆ, ವಾರ್ನಿಷ್ ಗೋಂದುಗಳು ಹೀಗಲ್ಲ. ಶರ್ಕರಷಿಷ್ಟ ಪದಾರ್ಥಗಳಿಗೆ ಸಂಬಂಧಿಸಿದ ಸಹಜಗೋಂದುಗಳು ನೀರಿನಲ್ಲಿ ದ್ರಾವ್ಯ. ಆಗ್ರ್ಯಾನಿಕ್ ದ್ರವಗಳಲ್ಲಿ ಅದ್ರಾವ್ಯ. ಕಾಯಿಸಿದಾಗ ದ್ರವಿಸದೆ ವಿಭಜನೆ ಹೊಂದುತ್ತವೆ. ವಾರ್ನಿಷ್ ಗೋಂದುಗಳು, ಟರ್ಪೀನ್ ಮತ್ತು ಸುಗಂಧತೈಲಗಳಿಗೆ ಸಂಬಧಿಸಿದ ಕರ್ಪೂರರಾಳಗಳು ಎಣ್ಣೆಗಳಲ್ಲಿ ಮತ್ತು ಆಗ್ರ್ಯಾನಿಕ್ ದ್ರವಗಳಲ್ಲಿ ದ್ರಾವ್ಯ, ಆದರೆ ನೀರಿನಲ್ಲಿ ಅದ್ರಾವ್ಯ. ಕಾಯಿಸಿದಾಗ ಇವು ಕರಗಿ ವಿಭಜನೆ ಹೊಂದುತ್ತವೆ. ವಾರ್ನಿಷ್ ರಾಳಗಳಿಗೆ ಗೋಂದು ಎನ್ನುವ ಮಾತು ಸರಿಯಲ್ಲ. ಆದರೂ ದೀರ್ಘ ಬಳಕೆಯಿಂದಾಗಿ ಅದನ್ನು ತೊಡೆದು ಹಾಕುವುದು ಅಸಾಧ್ಯವಾಗಿದೆ. ಅಲ್ಲದೆ ಕೆಲವು ನೈಸರ್ಗಿಕ ಉತ್ಪನ್ನಗಳು ವಾರ್ನಿಷ್ ರಾಳ ಮತ್ತು ಗೋಂದು ಎರಡರ ಗುಣಗಳನ್ನೂ ತಳೆಯುತ್ತವೆ. ಭಾರತದ ಸಾಂಬ್ರಾಣಿಯಿಂದ ಗೋಂದು ಟರ್ಪೀನುಗಳು ಮತ್ತು ಕರ್ಪೂರರಾಳವನ್ನು ಬೇರ್ಪಡಿಸಲಾಗಿದೆ.

ಕರ್ಪೂರರಾಳಗಳನ್ನು ಪಾರದರ್ಶಕತ್ವ, ಭೀದುರತೆ, ಶಂಕ್ವಾಕೃತಿಯ ಬಿರುಕುಗಳು ಮತ್ತು ಅವುಗಳ ಬಣ್ಣವಾದ ಕಂದು ಅಥವಾ ಹಳದಿಯಿಂದ ಗುರುತಿಸಬಹುದು. ಘನಸ್ಥಿತಿಯಲ್ಲಿ ಅವಕ್ಕೆ ಯಾವ ರುಚಿ ಮತ್ತು ವಾಸನೆ ಇಲ್ಲ. ಕಾಯಿಸಿದಾಗ ವಿಶಿಷ್ಟವಾದ ಪರಿಮಳವನ್ನು ಹೊರಚೆಲ್ಲುತ್ತವೆ. ಧೂಮಮಯ ಜ್ವಾಲೆಯಿಂದ ಉರಿಯುತ್ತವೆ. ಕರ್ಪೂರರಾಳಗಳ ವರ್ಗೀಕರಣಕ್ಕೆ ಕರಗುವಿಕೆ ಮತ್ತು ಕಠಿಣತೆಗಳೇ ನಿರ್ಣಾಯಕ ಗುಣಗಳು. ಕರಗುವಿಕೆಯ ಆಧಾರದ ಮೇಲೆ ಕರ್ಪೂರರಾಳಗಳನ್ನು ಆಲ್ಕೊಹಾಲ್ ದ್ರಾವ್ಯ ಮತ್ತು ತೈಲ ದ್ರಾವ್ಯಗಳೆಂದು ವಿಂಗಡಿಸಬಹುದು. ಸೆಲ್ಯುಲೋಸ್ ಮೆರುಗೆಣ್ಣೆಗಳ ತಯಾರಿಕೆಗೆ ಉಪಯೋಗಿಸುವ ಆಧುನಿಕ ಲೀನಕಾರಿಗಳನ್ನು ಕರ್ಪೂರರಾಳ ದ್ರಾವಣಗಳ ತಯಾರಿಕೆಗೂ ಉಪಯೋಗಿಸಬಹುದು. 

ಆಲ್ಕೊಹಾಲಿನಲ್ಲಿ ಕರಗುವ ಕರ್ಪೂರರಾಳಗಳು : 1 ಗುಗ್ಗುಲಗಳು: ದ್ರವಸ್ವಭಾವದ ಕರ್ಪೂರರಾಳಗಳು. ಆರೋಗ್ಯದಾಯಿಗಳಾಗಿ ಔಷಧಿಗಳಲ್ಲಿಯೂ ಹೆಚ್ಚು ಸುವಾಸನೆಯುಳ್ಳ ಕೆಲವು ಪರಿಮಳ ಪದಾರ್ಥಗಳಲ್ಲಿಯೂ ಉಪಯೋಗದಲ್ಲಿವೆ. ಬೆಂಜೋಯಿಕ್ ಅಥವಾ ಸಿನ್ನಾಮಿಕ್ ಆಮ್ಲ ಎಸ್ಟರುಗಳಲ್ಲಿ ಹರಡಿರುವ ಕರ್ಪೂರರಾಳಗಳನ್ನು ಗುಗ್ಗುಲಗಳೆಂದೂ ಸುಗಂಧತೈಲಗಳಲ್ಲಿ ಹರಡಿರುವ ಕರ್ಪೂರರಾಳಗಳನ್ನು ತೈಲರಾಳಗಳೆಂದೂ ಪರಿಗಣಿಸಲಾಗುವುದು. ಮಸೂರಗಳನ್ನು ಅಂಟಿಸಲು ಉಪಯೋಗಿಸುವ ಕೆನಡಾಬಾಲ್ಸಂ, ನಿಜವಾದ ಗುಗ್ಗುಲವಲ್ಲ. ಅದು ನಿಜಕ್ಕೂ ತೈಲರಾಳ ಟೊಲುಬಾಲ್ಸಂ, ಪೆರುಬಾಲ್ಸಂ ಮತ್ತು ಸ್ಟೋರಾಕ್ಸ್ ಬಾಲ್ಸಂಗಳು ನಿಜವಾದ ಗುಗ್ಗುಲಗಳು.

2  ಕರ್ಪೂರತೈಲಗಳು : ನಾನಾ ತೈಲರಾಳಗಳನ್ನು ಕರ್ಪೂರತೈಲಗಳೆಂದು ಕರೆಯಲಾಗುವುದು. ವೆನಿಸ್‍ಕರ್ಪೂರತೈಲ ಒಂದು ಜಾತಿಯ ಪೈನ್(ಲಾರ್ಚ್) ಮರದಿಂದ ಪಡೆದ ನಸುಹಸುರು ಬಣ್ಣದ ಸ್ನಿಗ್ಧ ದ್ರವ. ನಿಂಬೆಹಣ್ಣಿನ ವಾಸನೆಯ ಸ್ಟ್ರಾಸ್‍ಬೊರ್ಗ್ ಕರ್ಪೂರತೈಲ, ಬೋರ್ಡಾಕ್ಸ್ ಕರ್ಪೂರತೈಲ ಮತ್ತು ಅಮೆರಿಕದ ಅನೇಕ ಕರ್ಪೂರತೈಲಗಳು ಬಗೆಬಗೆಯ ಪೈನ್ ಮರಗಳಿಂದ ದೊರೆಯುತ್ತವೆ. ತೈಲರಾಳವನ್ನು ಬಟ್ಟಿ ಇಳಿಸಿದಾಗ ಬಾಷ್ಪಶೀಲ ಕರ್ಪೂರತೈಲ ಬೇರ್ಪಡುತ್ತದೆ.

3 ಮ್ಯಾಸ್ಟಿಕ್: ಮೆದು ಕರ್ಪೂರರಾಳ. ಕರಗುವ ಬಿಂದು ಸುಮಾರು 1050ಸೆಂ. ಗ್ರೀಕ್ ದ್ವೀಪಸಮುದಾಯದಲ್ಲಿ ಬೆಳೆಯುವ ಪಿಸ್ಟೇಸಿಯ ಸಂಕುಲದ ಮರಗಳಿಂದ ದೊರೆಯುತ್ತದೆ. ಇದನ್ನು ಕರ್ಪೂರತೈಲದೊಡನೆ ಮೆರುಗೆಣ್ಣೆಯಾಗಿ, ನಾರಗಸೆ ಎಣ್ಣೆಯೊಡನೆ ವರ್ಣವಾಹಕವಾಗಿ ಉಪಯೋಗಿಸಲಾಗುವುದು. 

4 ಡ್ರ್ಯಾಗನ್ಸ್‍ಬ್ಲಡ್ ಮತ್ತು ಗ್ಯಾಂಬೋಜ್: ಈಸ್ಟ್ ಇಂಡೀಸಿನಲ್ಲಿ ಬೆಳೆಯುವ ತಾಳೆಯ ಜಾತಿಯ ಮರದ ಹಣ್ಣುಗಳಿಂದ ಸ್ರವಿಸುವ ಕರ್ಪೂರರಾಳ. ಸ್ಥೂಲವೀಕ್ಷಣೆಗೆ ಕಪ್ಪುಮಿಶ್ರಿತ ಕಂದುಬಣ್ಣ, ಆದರೆ ತೆಳುಪೊರೆ ಕುಂಕುಮ ವರ್ಣ ಪಿಟೀಲಿಗೆ ಬಳಿಯುವ ಮೆರುಗೆಣ್ಣೆಗಳಲ್ಲಿ ಮತ್ತು ಆಲ್ಕೊಹಾಲ್ ಮೆರುಗೆಣ್ಣೆಗಳಿಗೆ ಕಡುಗೆಂಪು ಬಣ್ಣವಾಗಿ ಉಪಯೋಗಿಸಲಾಗುವುದು. ಗ್ಯಾಂಬೋಜನ್ನು ವರ್ಣವಾಹಕವಾಗಿ ಮತ್ತು ಔಷಧಿಗಳಲ್ಲಿ ಮತ್ತೊಂದು ಕರ್ಪೂರರಾಳವಾಗಿ ಉಪಯೋಗಿಸುತ್ತಾರೆ. 

5 ಡಾಮರ್: ಸ್ವಚ್ಛ ನಸುಹಳದಿ ಬಣ್ಣದ ಮಣಿಗಳ ರೂಪದಲ್ಲಿ ದೊರೆಯುವ ಕಠಿಣತರ ಕರ್ಪೂರರಾಳ. ಕರಗುವ ಬಿಂದು ಸುಮಾರು 1400ಸೆಂ. ಇದರಿಂದ ಶ್ರೇಷ್ಠವಾದ ಮೆರುಗೆಣ್ಣೆಗಳನ್ನು ತಯಾರಿಸಬಹುದು. 

6 ಸ್ಯಾಂಡರ್ಯಾಕ್: ಆಸ್ಟ್ರೇಲಿಯದಲ್ಲಿ ಬೆಳೆಯುವ ಸೈಪ್ರಸ್‍ಪೈಸ್‍ನಿಂದ ದೊರೆಯುವ ಕಠಿಣಕರ್ಪೂರರಾಳ ಕರಗುವ ಬಿಂದು 1500ಸೆಂ. ವಾರ್ನಿಷ್ ರೂಪದಲ್ಲಿ ಕಾಗದ, ಚರ್ಮ ಮತ್ತು ಲೋಹಗಳಿಗೆ ಬಳಿಯಲು ಉಪಯೊಗಿಸಲಾಗುವುದು. 

ತೈಲದ್ರಾವ್ಯಕರ್ಪೂರರಾಳಗಳು: 1 ರಾಸಿóನ್ (ಕಾಲೋಫೋನಿ): ಪೈನ್ ಮರದಿಂದ  ದೊರೆತ ತೈಲರಾಳವನ್ನು ಬಟ್ಟಿ ಇಳಿಸಿದಾಗ ಉಳಿಯುವ ಘನವಸ್ತುವೇ ರಾಸಿóನ್. ಮರದಿಂದ ರಂಧ್ರ ಮಾಡಿ ಇಳಿಸಿದ ಕರ್ಪೂರತೈಲದಿಂದ ಗಮ್‍ರಾಸಿóನ್ ಮತ್ತು ಮರದ ತುಂಡುಗಳಿಂದ ಸಂಸ್ಕರಿಸಿದ ಕರ್ಪೂರತೈಲದಿಂದ ವುಡ್‍ರೋಸಿನ್‍ಲಭಿಸುತ್ತವೆ. ಪೆಡಸಾದ ಕೂಡಲೇ ಪುಡಿಯಾಗುವ, ಬಿಸಿಗೆ ಜಿಗುಟಾಗುವ, ಆಗ್ರ್ಯಾನಿಕ್ ದ್ರವಗಳಲ್ಲಿ ಕರಗುವ ರಾಳ ಈ ರಾಸಿóನ್. ಇದರ ಪ್ರಮುಖ ಅಂಗವೆಂದರೆ ಅಬೇಟಿಕ್ ಆಮ್ಲ. ಅದರ ಅನೇಕ ಉಪಯೋಗಗಳು ಅದರ ಆಮ್ಲೀಯ ಗುಣಗಳನ್ನು ಅವಲಂಬಿಸಿವೆ. ಅಬಾಟಿಕ್ ಆಮ್ಲ ಕ್ಷಾರಗಳೊಡನೆ ಸಂಯೋಗ ಹೊಂದಿ ಸಾಬೂನುಗಳನ್ನು ಕೊಡುತ್ತದೆ. ಸೋಡಿಯಂ ಸಾಬೂನನ್ನು ಕಾಗದಕ್ಕೆ ಹೊಳಪು ಕೊಡಲು, ಸೀಸ, ಕೋಬಾಲ್ಟ್ ಮತ್ತು ಮ್ಯಾಂಗನೀಸ್ ಸಾಬೂನುಗಳನ್ನು ಬಣ್ಣ ಮತ್ತು ವಾರ್ನಿಷುಗಳಲ್ಲಿ ಶುಷ್ಕಕಾರಿಗಳಾಗಿ, ಕ್ಯಾಲ್ಸಿಯಂ ಮತ್ತು ಸತುವಿನ ಲವಣಗಳನ್ನು ಹೊಳಪು-ನುಣುಪೆಣ್ಣೆಗಳಲ್ಲಿ ಉಪಯೋಗಿಸಲಾಗುವುದು. ಗಾಳಿಯ ಸಂಪರ್ಕದಲ್ಲಿ ರಾಸಿóನ್ ಸುಲಭವಾಗಿ ಉತ್ಕರ್ಷಣ ಹೊಂದಲು ಅಬೇಟಿಕ್ ಆಮ್ಲದ ಸಂಯುಗ್ಮೀದ್ವಿಬಂಧ (ಕಾಂಜ್ಯುಗೇಟೆಡ್ ಡಬಲ್ ಬಾಂಡ್) ಕಾರಣವಿರಬಹುದು. ಹೈಡ್ರೊಜನ್ನಿನೊಡನೆ ಸಂಯೋಜಿಸುವುದರ ಮೂಲಕ ರಾಸಿóನನ್ನು ಮತ್ತಷ್ಟು ದೃಢಗೊಳಿಸಬಹುದು. 

2 ಕೋಪಲುಗಳು: ಮೆದುಮನಿಲ ಕೋಪಲ್ ಕೌರಿಕೋಪಲ್, ಕಾಂಗೊಕೋಪಲ್, ಭೂಮಿಯಿಂದ ಅಗೆದು ತೆಗೆಯುವ ಜಾಂಜಿಬಾರ್ ಕೋಪಲ್ ಈ ವರ್ಗದವು. ಮೆರುಗೆಣ್ಣೆ ಉದ್ಯಮದಲ್ಲಿ ಅನೇಕ ಬಗೆಯ ಕೋಪಲುಗಳ ಬಳಕೆ ಇದೆ. 

 

ಚಿತ್ರ-1

 

3 ಶಿಲಾರಾಳ : ಕಠಿಣತಮ ನೈಸರ್ಗಿಕ ಕರ್ಪೂರರಾಳ. ಪೂರ್ವ ಪ್ರಷ್ಯಾದ ನೀಲ ಭೂಮಿಯಲ್ಲಿ ಸಿಕ್ಕುತ್ತದೆ. ಕಾಲಾಂತರದಲ್ಲಿ ತಕ್ಕ ವಾತಾವರಣದಲ್ಲಿ ತೈಲರಾಳ ಶಿಲಾರಾಳವಾಗಬಲ್ಲದೆನ್ನುವುದಕ್ಕೆ ಪೈನ್ ಮರಗಳಿಂದ ಉತ್ಪತ್ತಿಯಾದ ಈ ರಾಳ ಸಾಕ್ಷಿ. ಸುಲಭದ್ರಾವ್ಯವಲ್ಲದ್ದರಿಂದ ಮೆರುಗಣ್ಣೆಗಳ ತಯಾರಿಕೆಯಲ್ಲಿ ಬಳಕೆಯಲ್ಲಿಲ್ಲ. ಮಣಿಗಳು ಮತ್ತು ಅಲಂಕಾರ ಸಾಮಗ್ರಿಗಳ ತಯಾರಿಕೆಯಲ್ಲಿ ಉಪಯೋಗವಾಗುವುದು.

4 ಪೌರ್ವಾತ್ಯ ಮೆರುಗೆಣ್ಣೆ: ಚೈನಾದೇಶದಲ್ಲಿ ಬೆಳೆಯುವ ಒಂದು ಮರದಿಂದ ಸಂಗ್ರಹಿಸಿದ ಹಾಲಿನಂಥ ದ್ರವ. ಬಾಷ್ಪೀಭವನದಿಂದ ಸಾಂದ್ರಗೊಳಿಸಿದ ಸ್ನಿಗ್ಧ ದ್ರವವನ್ನು ಹೊದಿಕೆಯಾಗಿ ಬಳಿದಾಗ ಒಂದು ದಿವಸ ಮಾತ್ರಕ್ಕೆ ಒಣಗಿಕೊಳ್ಳುತ್ತದೆ. ಬೆಳಕಿಲ್ಲದ ಶೀತಲವಾತಾವರಣದಲ್ಲಿ ಮಾತ್ರ ಒಣಗುವುದು ಇದರ ವೈಶಿಷ್ಟ್ಯ. ಇದರಲ್ಲಿ ಚರ್ಮವನ್ನು ಉದ್ರೇಕಗೊಳಿಸುವ ವಸ್ತುವಿದೆ. 

5 ಗೇರೆಣ್ಣೆ: ಗೇರುಬೀಜಗಳಿಂದ ದೊರೆಯುವ ಫೀನಾಲುಗಳನ್ನೊಳಗೊಂಡ ಎಣ್ಣೆ. ಇದರಲ್ಲಿರುವ ಸಂಯುಕ್ತಗಳು ಚರ್ಮದ ಮೇಲೆ ಬೊಬ್ಬೆಗಳನ್ನು ಏಳಿಸುತ್ತವೆ. ತಕ್ಕ ರಸಾಯನ ಸಂಸ್ಕಾರದಿಂದ ಈ ಉದ್ರೇಕಕಾರಿವಸ್ತುಗಳನ್ನು ನಾಶಮಾಡಬಹುದು. 

 

(ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ